ಅಭಿಪ್ರಾಯ / ಸಲಹೆಗಳು

ನಿರ್ದೇಶಕರುಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

ಕರ್ನಾಟಕ ಸರ್ಕಾರ

(ಬಂಡವಾಳ ಹಿಂತೆಗೆಯುವಿಕೆ ಮತ್ತು ರಾಜ್ಯ ಸಾರ್ವಜನಿಕ ಉದ್ದಿಮೆಗಳ ಸುಧಾರಣೆ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ಬೆಂಗಳೂರು 560 001 ದಿನಾಂಕ 07-05-2003)

ಸಂಖ್ಯೆ ಡಿಡಿಪಿಇಆರ್ 35 ಎಆರ್ ಯು 2003

ಅಧಿಕೃತ ಜ್ಞಾಪನ

ವಿಷಯ: ಸಾರ್ವಜನಿಕ ಉದ್ದಿಮೆಗಳ ಆಡಳಿತ ನಿರ್ವಾಹಕ ಮಂಡಳಿಯ ನಿರ್ದೇಶಕರುಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಕರು, ಅರೆಕಾಲಿಕ ಅಧಿಕಾಸ್ಥ ಮತ್ತು ಅಧಿಕಾರೇತರ ನಿರ್ದೇಶಕರುಗಳ ಕರ್ತವ್ಯಗಳು

ಉಲ್ಲೇಖಗಳು:

1) ಮುಖ್ಯ ಕಾರ್ಯದರ್ಶಿಗಳ ಅರೆ ಸರ್ಕಾರಿ ಪತ್ರ ಸಂಖ್ಯೆ ಡಿಪಿಎಆರ್ (ಬಿಪಿಇ) 5 ಎಂಎಯು 80 ದಿನಾಂಕ 27-11-1980
2) ಅಧಿಕೃತ ಪತ್ರ ಸಂಖ್ಯೆ ಡಿಪಿಎಆರ್ (ಬಿಪಿಇ_ 2 ಎಸ್.ಬಿ.ಡಿ 81 ದಿನಾಂಕ 03-03-1981 ಮತ್ತು ಇದೇ ಸಮ ಸಂಖ್ಯೆಯ ಪತ್ರ ದಿನಾಂಕ 21.04.1981.
3) ಮುಖ್ಯ ಕಾರ್ಯದರ್ಶಿಗಳ ಅರೆ ಸರ್ಕಾರಿ ಪತ್ರ ಸಂಖ್ಯೆ ಡಿಪಿಎಆರ್ (ಬಿಪಿಇ) 7 ಎಂಎಯು 81 ದಿನಾಂಕ 25-04-1981

ಮೇಲಿನ ಉಲ್ಲೇಖಗಳಲ್ಲಿ ಕಾಣಿಸಿರುವಂತೆ, ಸರ್ಕಾರವು ಸಾರ್ವಜನಿಕ ಉದ್ದಿಮೆಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಕರು ಅರೆಕಾಲಿಕ ಅಧಿಕಾರಿ/ಅಧಿಕಾರೇತರ ನಿರ್ದೇಶಕರ ಪಾತ್ರ, ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಹಿಂದೆಯೇ ವಿಸ್ತಾರವಾದ ಮಾರ್ಗದರ್ಶನ ಸೂತ್ರಗಳನ್ನು ಹೊರಡಿಸಿದೆ.  ಸಾರ್ವಜನಿಕ ಉದ್ದಿಮೆಗಳ ಸುಧಾರಣೆಯತ್ತ ಮತ್ತು ಸಾರ್ವಜನಿಕ ಉದ್ದಿಮೆಗಳ ಆರ್ಥಿಕ ಹಿತದೃಷ್ಟಿಯಿಂದ ವೆಚ್ಚವನ್ನು ಕಡಿಮೆ ಮಾಡುವ ಅವಶ್ಯಕತೆಯೊಂದಿಗೆ, ಸಾರ್ವಜನಿಕ ಉದ್ದಿಮೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಇಂತಹ ಉದ್ದಿಮೆಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥನೀಯವಾಗಿ ನಿರ್ವಹಿಸುವುದು ಅವಶ್ಯಕವಾಗಿರುತ್ತದೆ.  ಈ ಕಾರ್ಯದಲ್ಲಿ ಪ್ರಾಥಮಿಕ ಸಾರ್ವಜನಿಕ ಉದ್ದಿಮೆಗಳ ಕಾರ್ಯನೀತಿ ರೂಪಿಸುವ ಅಂಗವಾದಂತಹ ಆಡಳಿತ ನಿರ್ವಹಣಾ ಮಂಡಳಿಯ ಬೆಂಬಲವು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಅವಶ್ಯಕವಿರುತ್ತದೆ.
2. ಸರ್ಕಾರವು ಇತ್ತೀಚೆಗೆ ಹಲವಾರು ಸಾರ್ವಜನಿಕ ಉದ್ದಿಮೆಗಳಿಗೆ ಅಧಿಕಾರೇತರ ಅಧ್ಯಕ್ಷರು ಹಾಗೂ ಅರೆಕಾಲಿಕ ನಿರ್ದೇಶಕರನ್ನು ನೇಮಿಸಿ ಆಡಳಿತ ಮಂಡಳಿಗಳನ್ನು ರಚಿಸಿರುತ್ತದೆ.  ಈ ರೀತಿ ನೇಮಿಸಲ್ಪಟ್ಟ ಹೆಚ್ಚು ಜನಗಳಿಗೆ ತಮ್ಮ ಪಾತ್ರ, ಅಧಿಕಾರ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ನೀತಿ ಮತ್ತು ಆದೇಶಗಳ ಬಗ್ಗೆ ಮಾಹಿತಿ ಇಲ್ಲದಿರಬಹುದು.  ಆದಕಾರಣ ಅಧಿಕಾರೇತರ ಅಧ್ಯಕ್ಷರುಗಳು ಮತ್ತು ನಿರ್ದೇಶಕರನ್ನು ಸಾರ್ವಜನಿಕ ಉದ್ದಿಮೆಗಳಿಗೆ ನೇಮಿಸಿದ ಮೇಲೆ ಆಡಳಿತ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿ ಕ್ಲಿಷ್ಟತೆಗಳ ಅನುಭವಗಾಗುತ್ತಿದೆ.  ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ, ಅಧಿಕಾರಿ/ಅಧಿಕಾರೇತರ ನಿರ್ದೇಶಕರು, ಇವರುಗಳ ಪಾತ್ರ, ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಈಗಿರುವ ಮಾರ್ಗದರ್ಶನ ಸೂತ್ರಗಳ ಜೊತೆಯಲ್ಲಿ ಒತ್ತಿ ಹೇಳುವುದರೊಂದಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದು ಅವಶ್ಯಕವೆಂದು ಭಾವಿಸಿ ಈ ಕೆಳಗಿನಂತೆ ಹೇಳಲಾಗಿದೆ.
 1. ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಸಂಬಂಧಪಟ್ಟ ಸಾರ್ವಜನಿಕ  ಉದ್ದಿಮೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ನಿರ್ವಹಿಸತಕ್ಕದ್ದು. ಅಧ್ಯಕ್ಷರು ಕಾರ್ಯನಿರ್ವಾಹಕ ಮಂಡಳಿ ಸಭೆಗಳ ಅಧ್ಯಕ್ಷತೆಯನ್ನು ಮಾತ್ರ ವಹಿಸಿ ವ್ಯವಹಾರದ ನಿರ್ವಹಣೆಯಲ್ಲಿ ಕಂಪನಿಗೆ ಅವಶ್ಯಕ ಮಾರ್ಗದರ್ಶನವನ್ನು ಒದಗಿಸುವುದು.  ಈ ನಿಟ್ಟಿನಲ್ಲಿ ಸರ್ಕಾರವು ಈಗಾಗಲೇ ಮೇಲೆನ ಉಲ್ಲೇಖ ಒಂದರ ಪ್ರಕಾರ 1980ರಲ್ಲಿ ಹೊರಡಿಸಿರುವ ಪತ್ರದಲ್ಲಿ ಸರ್ಕಾರದ ಆದೇಶಗಳಿಗನುಗುಣವಾಗಿ ಕಂಪನಿಯ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ಗೆ ತಿದ್ದುಪಡಿ ಮಾಡಿರದಿದ್ದಲ್ಲಿ ತಕ್ಷಣ ತಿದ್ದುಪಡಿ ಮಾಡುವ ಕ್ರಮ ಕೈಗೊಳ್ಳುವುದು. 
 2. ಸಾಮಾನ್ಯವಾಗಿ ಆಡಳಿತ ನಿರ್ವಾಹಕ ಮಂಡಳಿಯು ಕಂಪನಿಯ ಕಾರ್ಯನೀತಿಗೆ ಸಂಬಂಧಿಸಿದಂತೆ ಮತ್ತು ಸರ್ಕಾರದ ಅನುಮೋದನೆಗೆ ಅವಶ್ಯಕವಿರುವ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ.  ಕಾರ್ಯ ನಿರ್ವಾಹಕ ಮಂಡಳಿಯಿಂದ ಪ್ರದತ್ತವಾದ ಅಧಿಕಾರಗಳನ್ವಯ ಎಲ್ಲಾ ದೈನಂದಿನ ಕಾರ್ಯನಿರ್ವಹಣಾ ಮತ್ತು ವ್ಯವಸ್ಥಾಪಕ ಕರ್ತವ್ಯಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರೆ ಪೂರ್ಣ ಅವಧಿಯ ಅಧಿಕಾರಿಗಳು ನಿರ್ವಹಿಸತಕ್ಕದ್ದು.
 3. ಕಾರ್ಯ ನಿರ್ವಾಹಕ ಮಂಡಳಿಗಳ ಉಪ ಸಮಿತಿಗಳನ್ನು ಸಾರ್ವಜನಿಕ ಉದ್ದಿಮೆಗಳ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ನಲ್ಲಿ ಅವಕಾಶವಿದ್ದಲ್ಲಿ ಮಾತ್ರ ನೇಮಿಸುವುದು ಇಲ್ಲದಿದ್ದಲ್ಲಿ ನೇಮಿಸಬಾರದು.  ಅಲ್ಲದೇ ಇಂತಹ  ಉಪ ಸಮಿತಿಗಳು ನೇಮಕಾತಿಯಾದ ಮೇಲೆ ಆಡಳಿತ ನಿರ್ವಹಣಾ ಮಂಡಳಿ ಪರವಾಗಿನ ವಿಷಯಗಳ ಬಗ್ಗೆ ಮಾತ್ರ ವ್ಯವಹರಿಸಬೇಕೇ ಹೊರತು ದೈನಂದಿನ ಕಾರ್ಯನಿರ್ವಹಣಾ ಕರ್ತವ್ಯಗಳ ಬಗ್ಗೆ ವ್ಯವಹರಿಸಬಾರದು.
 4. ಅರೆ ಕಾಲಿಕ ಅಧಿಕಾರಸ್ಥ ಮತ್ತು ಅಧಿಕಾರೇತರ ನಿರ್ದೇಶಕರುಗಳು ಸಾರ್ವಜನಿಕ ಉದ್ದಿಮೆಗಳ ಕಾರ್ಯನಿರ್ವಾಹಕ ಮಂಡಳಿ ಸಭೆಗಳಲ್ಲಿ ಭಾಗವಹಿಸುವುದನ್ನು ಮಾತ್ರ ನಿರೀಕ್ಷಿಸಲಾಗುತ್ತದೆ ಮತ್ತು ಯಾವುದೇ ವಿಧವಾದ ಕಾರ್ಯನಿರ್ವಹಣಾ ಕರ್ತವ್ಯಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರುವುದಿಲ್ಲ.  ಆದುದರಿಂದ ಕಾರ್ಯ ನಿರ್ವಾಹಕ ಮಂಡಳಿ ಸಭೆಗಳಲ್ಲಿ ಸರ್ಕಾರದ ಆದೇಶಕ್ಕೆ ಸಂಬಂಧಪಟ್ಟಂತೆ ಭಾಗವಹಿಸುವ ಸಂದರ್ಭಗಳಲ್ಲಿ ಮಾತ್ರ ಟಿಎ/ಡಿಎ ಮತ್ತು ನಿಟ್ಟಿಂಗ್ ಶುಲ್ಕಗಳಿಗೆ ಅರ್ಹರಾಗಿರುತ್ತಾರೆಯೇ ಹೊರತು ಇನ್ಯಾವುದೇ ಭತ್ಯೆಗಳು ಅಥವಾ ಕಛೇರಿಯಲ್ಲಿ ಸ್ಥಳಾವಕಾಶ, ದೂರವಾಣಿ, ವಾಹನ, ವಿಸಿಟಿಂಗ್ ಕಾರ್ಡ್ ಮತ್ತಿತರ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ.
 5. ಕಛೇರಿಯ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಅರೆಕಾಲಿಕ ನಿರ್ದೇಶಕರು, ಪ್ರವಾಸ ಕೈಗೊಳ್ಳಲು ಸಾಮಾನ್ಯವಾಗಿ ಅವಕಾಶವಿರುವುದಿಲ್ಲ.  ಆದರೆ ಅಸಾಧಾರಣ ಸಂದರ್ಭಗಳಲ್ಲಿ ಮುಖ್ಯ ಕಾರ್ಯನಿರ್ವಾಹಕರುಗಳಿಂದ ಮುಂಚಿತವಾಗಿ ಒಪ್ಪಿಗೆ ಪಡೆಯುವುದು ಈಗಾಗಲೇ ಇರುವ ಮಾರ್ಗದರ್ಶನಗಳನ್ವಯ ಇರುವಂತೆ ಅವಶ್ಯವಾಗಿದೆ.
 6. ಸಾಮಾನ್ಯವಾಗಿ ಆಡಳಿತ ನಿರ್ವಾಹಕ ಮಂಡಳಿ ಸಭೆಗಳು 3 ತಿಂಗಳಿಗೊಮ್ಮೆ ನಡೆಯುತ್ತವೆ.  ಆದರೆ, ವಿಶೇಷ ಸಂದರ್ಭಗಳಲ್ಲಿ ವ್ಯವಹಾರ ದೃಷ್ಟಿಯಿಂದ ಅನಿವಾರ್ಯವಾದಾಗ ಮಾತ್ರ ವರ್ಷಕ್ಕೆ 6 ಸಭೆಗಳಿಗಿಂತ ಮತ್ತು 2 ತಿಂಗಳುಗಳಿಗೆ ಒಂದು ಸಭೆಗಿಂತ ಹೆಚ್ಚು ಸಭೆಗಳನ್ನು ನಡೆಸಬಾರದೆಂಬ ಷರತ್ತಿನೊಡನೆ ನಡೆಸಬಹುದಾಗಿದೆ.  ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಚರ್ಚಿಸಿ ಆಡಳಿತ ಮಂಡಳಿಯ ನಿರ್ವಾಹಕ ಸಭೆಗಳ ದಿನಾಂಕಗಳನ್ನು ಮುಂಚಿತವಾಗಿಯೇ ನಿರ್ಧರಿಸತಕ್ಕದ್ದು.
 7. ಎಲ್ಲಾ ಸಾರ್ವಜನಿಕ ಉದ್ದಿಮೆಗಳಲ್ಲಿ ಸರ್ಕಾರ ಹೊರಡಿಸಿರುವ ಸರ್ಕಾರದ ಅವಕಾಶಗಳು, ಸುತ್ತೋಲೆಗಳು ಮತ್ತಿತರ ಮಾರ್ಗದರ್ಶನಗಳು, ಅನುಷ್ಠಾನವಾಗುವಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಸಂಬಂಧಿಸಿದ ಸಾರ್ವಜನಿಕ ಉದ್ದಿಮೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಇರುತ್ತದೆ.  ಸದರಿ ಸೂಚನೆಗಳನ್ನು ಅಳವಡಿಸಿಕೊಳ್ಳಲು ಅನುವಾಗುವಂತೆ ಆಡಳಿತ ನಿರ್ವಾಹಕ ಮಂಡಳಿ ಸಭೆಯ ಮುಂದೆ ಅನುಮೋದನೆ ಅವಶ್ಯಕವಾಗಿರುತ್ತದೋ, ಅಂತಹವುಗಳನ್ನು ಎಂತಹುದೇ ಸನ್ನಿವೇಶಗಳಿದ್ದರೂ ಸಹ ಸರ್ಕಾರದ ಅನುಮೋದನೆ ಇಲ್ಲದೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಷ್ಠಾನಕ್ಕೆ ತರತಕ್ಕದ್ದಲ್ಲ.
 8. ಸರ್ಕಾರದ ಸುತ್ತೋಲೆಗಳು, ಮಾರ್ಗದರ್ಶನಗಳು ಮತ್ತಿತರೆಡೆಗಳಲ್ಲಿ ಹೇಳಿರುವಂತೆ ಸಾರ್ವಜನಿಕ ಉದ್ದಿಮೆಗಳ ಅಧ್ಯಕ್ಷರುಗಳು ಹಾಗೂ ನಿರ್ದೇಶಕರುಗಳ ಪಾತ್ರ, ಕರ್ತವ್ಯ ಮತ್ತು ಜವಾಬ್ದಾರಿಯ ನಿರ್ವಹಣೆಯ ಕಾರ್ಯವನ್ನು ನಿಯಮಗಳು ಮತ್ತು ಸೂಚನೆಗಳ ರೀತಿಯಲ್ಲಿ ಅನುಷ್ಠಾನಕ್ಕೆ ತರುವುದು ಮುಖ್ಯ ಕಾರ್ಯನಿರ್ವಾಹಕ ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ.
 9. ಸರ್ಕಾರವು ಹೊರಡಿಸಿರುವ ಆದೇಶ, ನಿಯಮ ನಿಬಂಧನೆಗಳಿಗೆ ಬಹುಸಂಖ್ಯಾತ ನಿರ್ದೇಶಕರುಗಳ ಸಮ್ಮತಿ ಪಡೆಯಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆಗದಿದ್ದಲ್ಲಿ, ಅಥವಾ ತೆಗೆದುಕೊಳ್ಳು ನಿರ್ಧಾರವು, ಈ ರೀತಿ ಹೊರಡಿಸಿರುವ ಆದೇಶ, ನಿಯಮ ನಿಬಂಧನೆಗಳಿಗೆ ವ್ಯತಿರಿಕ್ತವಾಗಿದ್ದಲ್ಲಿ ಅಥವಾ ಸಂಸ್ಥೆಯ ಹಣಕಾಸು ಮತ್ತು ವಾಣಿಜ್ಯ ಆಸಕ್ತಿಗಳಿಗೆ ವಿರುದ್ಧವಾಗಿದ್ದಲ್ಲಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಅಭಿಪ್ರಾಯ ಬೇಧದ ಟಿಪ್ಪಣಿಯನ್ನು ನೀಡಲು ಲಭ್ಯವಿರುವ ಅಧಿಕಾರವನ್ನು ಉಪಯೋಗಿಸಿಕೊಳ್ಳತಕ್ಕದ್ದು.  ಅಂತಹ ಸಂದರ್ಭಗಳಲ್ಲಿ ಆಡಳಿತ ಮಂಡಳಿಯ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಬಾರದು ಹಾಗೂ ಸದರಿ ವಿಷಯವನ್ನು ಸಂಬಂಧಿಸಿದ ಸನ್ನಿವೇಶಗಳ ವಿವರಣೆಗಳೊಂದಿಗೆ ಸರ್ಕಾರಕ್ಕೆ ಉಲ್ಲೇಖಿಸಿ ಸರ್ಕಾರದ ಆದೇಶವನ್ನು ಕೋರುವುದು.
3. ಮೇಲಿನಂತೆ ಸರ್ಕಾರದ ಸೂಚನೆಗಳನ್ನು ಸಂಬಂಧಿಸಿದ ಎಲ್ಲರೂ ಅನುಸರಿಸಲು ಸಾಧ್ಯವಾಗುವಂತೆ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳನ್ನು ಕೆಳಗಿನಂತೆ ಕ್ರಮ ಕೈಗೊಳ್ಳಲು ಕೋರಲಾಗಿದೆ.
(ಅ)  ಈಗಾಗಲೇ ನೀಡಲಾಗಿರುವ ಸರ್ಕಾರದ ಆದೇಶ ಮತ್ತು ಸೂಚನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಾವುದಾದರೂ ತಿದ್ದುಪಡಿ ಅವಶ್ಯಕವಿದೆಯೇ ಎಂಬುದನ್ನು ತಮ್ಮ ನಿಯಂತ್ರಣದಲ್ಲಿರುವ ಎಲ್ಲಾ ಸಾರ್ವಜನಿಕ ಉದ್ದಿಮೆಗಳ Articles of Association ನ್ನು ಪರಿಶೀಲಿಸಿಕೊಂಡು, ಈ ನಿಟ್ಟಿನಲ್ಲಿ ಅಂತಹ ತಿದ್ದುಪಡಿಗಳನ್ನು ತರಲು ಅವಶ್ಯಕ ಕ್ರಮ ಕೈಗೊಳ್ಳುವುದು.
(ಆ) ಸುತ್ತೋಲೆಗಳಲ್ಲಿ ಅಡಕವಾಗಿರುವ ಸೂಚನೆಗಳನ್ನು ಮತ್ತು ನಿಯಮಗಳನ್ನು, ಸರ್ಕಾರವು ಅಧ್ಯಕ್ಷರು ಮತ್ತು ನಿರ್ದೇಶಕರು ಪಾತ್ರ, ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಹೊರಡಿಸಲಾಗಿರುವ ಮಾರ್ಗದರ್ಶನಗಳನ್ವಯ ಅನುಷ್ಠಾನಕ್ಕೆ ತರುವುದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯ ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ ಎಂಬುದನ್ನು Articles of Association ನಲ್ಲಿ ಅಳವಡಿಸುವುದು.  ಈ ನಿಟ್ಟಿನಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯು ಇಂತಹ ಆಡಳಿತ ಮಂಡಳಿಯ ನಿರ್ಧಾರವನ್ನು, ಅವುಗಳು  ಸಂಸ್ಥೆಯ ಹಣಕಾಸು ಮತ್ತು ವಾಣಿಜ್ಯ ಹಿತದೃಷ್ಠಿಗೆ ವಿರುಧ್ಧವಾಗಿದ್ದರೆ ಅಥವಾ ಸರ್ಕಾರದ ನಿಯಮಗಳು, ಆದೇಶಗಳು ಮತ್ತು ಸೂಚನೆಗಳ ಪ್ರಕಾರ ಇಲ್ಲದಿದ್ದರೆ ಅಂತಹ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರದಿರಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನ್ನ ಒಪ್ಪಿಗೆ ಇಲ್ಲ ಎಂಬುದನ್ನು ಸಭೆಯ ಸಂಕ್ಷಿಪ್ತ ಟಿಪ್ಪಣಿಯಲ್ಲಿ ನಮೂದಿಸಿ ಸದರಿ ವಿಷಯವನ್ನು ಸಂಬಂಧಿಸಿದ ಸನ್ನಿವೇಶಗಳ ವಿವರಣೆಗಳೊಂದಿಗೆ ಸರ್ಕಾರಕ್ಕೆ ಉಲ್ಲೇಖಿಸಿ ಸರ್ಕಾರದ ಆದೇಶವನ್ನು ಕೋರುವುದು.
4.  ಸಾರ್ವಜನಿಕ ಉದ್ದಿಮೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಅವರ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ನಿರ್ವಹಿಸುವುದರೊಂದಿಗೆ ಅಧ್ಯಕ್ಷರುಗಳ ಮತ್ತು ಅರೆಕಾಲಿಕ ಅಧಿಕಾರೇತರ ನಿರ್ದೇಶಕರುಗಳ ವಿವಿಧ ಕ್ಷೇತ್ರೀಯ ಅನುಭವ ಮತ್ತು ನಿಪುಣತೆಯನ್ನು ಉಪಯೋಗಿಸಿಕೊಳ್ಳುವಲ್ಲಿ ಮೇಲಿನ ಸೂಚನೆಗಳು ಅನುವು ಮಾಡಿಕೊಡುತ್ತವೆ ಎಂದು ಆಶಿಸಲಾಗಿದೆ.  ಆಡಳಿತ ಇಲಾಖೆಯ ಕಾರ್ಯದರ್ಶಿಗಳು ಮತ್ತು ಸರ್ಕಾರದ ಅಧಿಕಾರಿ ಅರೆಕಾಲಿಕ ನಿರ್ದೇಶಕರುಗಳು ತಮ್ಮ ಪಾತ್ರವನ್ನು ಸಂಬಂಧಿಸಿದ ಸಾರ್ವಜನಿಕ ಉದ್ದಿಮೆಗಳ ನಿರ್ವಹಣೆಯನ್ನು ಉತ್ತಮ ಪಡಿಸುವಲ್ಲಿ ಅದರಲ್ಲೂ ಆರ್ಥಿಕವಾಗಿ ದುರ್ಬಲವಾದ ಉದ್ದಿಮೆಗಳನ್ನು ಸುಧಾರಿಸುವಲ್ಲಿ ಕ್ರಿಯಾತ್ಮಕ ಪಾತ್ರ ವಹಿಸುತ್ತಾರೆಂದು ಸರ್ಕಾರವು ನಿರೀಕ್ಷಿಸುತ್ತದೆ.
 
                                                                                                                                                               (ಬಿ.ಎಸ್. ಪಾಟೀಲ್)
                                                                                                                                                        ಸರ್ಕಾರದ ಮುಖ್ಯ ಕಾರ್ಯದರ್ಶಿ
ರಾಜ್ಯದ ಎಲ್ಲಾ ಸಾರ್ವಜನಿಕ ಉದ್ದಿಮೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ
 
ಪ್ರತಿ:
1) ಕರ್ನಾಟಕ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯವರಿಗೆ
2) ಮುಖ್ಯ ಮಂತ್ತಿಗಳ ಪ್ರಧಾನ ಕಾರ್ಯದರ್ಶಿಯವರಿಗೆ
3) ಸಚಿವರುಗಳ ಮತ್ತು ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು/ಸರ್ಕಾರದ ಕಾರ್ಯದರ್ಶಿಗಳು
4) ಎಲ್ಲಾ ಇಲಾಖೆಗಳ ಮುಖ್ಯಸ್ಥರುಗಳಿಗೆ.

ಇತ್ತೀಚಿನ ನವೀಕರಣ​ : 09-07-2019 11:52 AM ಅನುಮೋದಕರು: N R Jaganmatha


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080